ಪ್ಲಾಸ್ಟಿಕಾಯಣ
“ಪ್ಲಾಸ್ಟಿಕಾಯಣ” ಕೃತಿಯು ಪ್ಲಾಸ್ಟಿಕ್ ಎನ್ನುವ ವಿಷಯದ ರಸಾಯನಶಾಸ್ತ್ರ, ಇತಿಹಾಸ ಹಾಗೂ ಅದರ ಸಾಂಪ್ರತಿಕ ಸ್ಥಿತಿಗತಿಗಳನ್ನು ಓದುಗರ ಮುಂದಿಡುವ ವಿಶಿಷ್ಟ ಪ್ರಯತ್ನವಾಗಿದೆ. ಲೇಖಕರು ಶ್ರೀ ಕೊಳ್ಳೇಗಾಲ ಶರ್ಮ, ಈ ಕೃತಿಯನ್ನು ಜಾಣಸುದ್ದಿ ಧ್ವನಿಪತ್ರಿಕೆಯಲ್ಲಿ ಪ್ರಸಾರವಾದ “ಪ್ಲಾಸ್ಟಿಕ್ ಪುರಾಣ” ಧಾರಾವಾಹಿಯಿಂದ ರೂಪಿಸಿದ್ದಾರೆ.

ಈ ಧಾರಾವಾಹಿ ಜಾಣಸುದ್ದಿ ಪಾಡ್‌ಕಾಸ್ಟ್ನಲ್ಲಿ ಒಟ್ಟು ಇಪ್ಪತ್ತೈದು ಭಾಗಗಳಾಗಿ ಪ್ರಸಾರಗೊಂಡಿದ್ದು, ಪ್ರತಿಯೊಂದು ಭಾಗವೂ ಪ್ಲಾಸ್ಟಿಕ್‌ನ ವೈಜ್ಞಾನಿಕ, ತಾಂತ್ರಿಕ ಮತ್ತು ಸಾಮಾಜಿಕ ಆಯಾಮಗಳನ್ನು ಮನೋಜ್ಞವಾಗಿ ಪರಿಚಯಿಸುತ್ತದೆ. ಆ ಇಪ್ಪತ್ತೈದು ಧ್ವನಿಪತ್ರಿಕೆಗಳ ಪಠ್ಯರೂಪವೇ ಈ ಪುಸ್ತಕ.
ಕೃತಿಯು ಪ್ಲಾಸ್ಟಿಕ್ ಎಂದರೇನು? ಎಂಬ ಮೂಲ ಪ್ರಶ್ನೆಯಿಂದ ಆರಂಭವಾಗಿ, ಅದರ ಆವಿಷ್ಕಾರ, ಮೊದಲ ಪ್ಲಾಸ್ಟಿಕ್ ಉತ್ಪಾದನೆ, ಪ್ಲಾಸ್ಟಿಕ್‌ನ ವಿಭಿನ್ನ ಬಗೆಗಳು, ಅವುಗಳ ಉಪಯೋಗಗಳು, ಪ್ಲಾಸ್ಟಿಕ್‌ನಿಂದ ಉಂಟಾಗುವ ಪರಿಸರ ಸಮಸ್ಯೆಗಳು, ಮರುಬಳಕೆ (ರೀಸೈಕ್ಲಿಂಗ್) ಸೇರಿದಂತೆ ಹಲವಾರು ಪ್ರಸ್ತುತ ವಿಷಯಗಳನ್ನು ಆಳವಾಗಿ ಚರ್ಚಿಸುತ್ತದೆ. ಇತ್ತೀಚಿನ ಬೆಳವಣಿಗೆಗಳೂ ಇದರಲ್ಲಿರುವುದು ವಿಶೇಷ.
ಓದುಗರಿಗೆ ಈ ಪುಸ್ತಕವು ಕೇವಲ ಓದುವ ಅನುಭವವಷ್ಟೇ ಅಲ್ಲ, ಅದನ್ನು ಕೇಳುವ ಅವಕಾಶವನ್ನೂ ಒದಗಿಸುವ ವಿಶಿಷ್ಟ ಪ್ರಯತ್ನವಾಗಿದೆ. ಹೀಗಾಗಿ “ಪ್ಲಾಸ್ಟಿಕಾಯಣ”ವು ವಿಜ್ಞಾನಾಸಕ್ತರು, ಪರಿಸರಪರರು, ವಿದ್ಯಾರ್ಥಿಗಳು ಮತ್ತು ಸಾಮಾನ್ಯ ಓದುಗರೆಲ್ಲರಿಗೂ ಒಂದು ಮಾಹಿತಿಪೂರ್ಣ ಹಾಗೂ ಆಕರ್ಷಕ ಪುಸ್ತಕವಾಗುತ್ತದೆ.
ಮೈಸೂರಿನ ಚುರುಮುರಿಗೆ ಅಂತರಿಕ್ಷದ ಟೊಮ್ಯಾಟೊ
ತಂತ್ರಜ್ಞಾನ ನಮ್ಮ ಬದುಕನ್ನು ಹೇಗೆ ತಲುಪುತ್ತದೆ? ಅದು ನಮ್ಮ ನಿತ್ಯಜೀವನವನ್ನು ಹೇಗೆ ರೂಪಿಸುತ್ತದೆ? ಈ ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನವೇ “ಮೈಸೂರಿನ ಚುರುಮುರಿಗೆ ಅಂತರಿಕ್ಷದ ಟೊಮ್ಯಾಟೊ”.

ಅಂಕಣಕಾರ ಶ್ರೀ ಟಿ. ಜಿ. ಶ್ರೀನಿಧಿ ಅವರ ಟೆಕ್‌ನೋಟ ಅಂಕಣದಿಂದ ಆರಿಸಿಕೊಂಡ ಈ ಬರಹಗಳು ತಂತ್ರಜ್ಞಾನದ ಒಳ-ಹೊರಗುಗಳನ್ನು ನವಿರಾಗಿ ತೆರೆದಿಡುತ್ತವೆ. ನಿತ್ಯ ಬಳಸುವ ಸಾಧನಗಳಿಂದ ಹಿಡಿದು ಅಂತರಿಕ್ಷ ಸಂಶೋಧನೆವರೆಗಿನ ಉದಾಹರಣೆಗಳನ್ನು ಬಳಸಿ, ಅವರು ತಂತ್ರಜ್ಞಾನವು ನಮ್ಮ ಜೀವನವನ್ನು ಹೇಗೆ ಸ್ಪರ್ಶಿಸುತ್ತಿದೆ ಎಂಬುದನ್ನು ಸ್ಪಷ್ಟವಾಗಿ ವಿವರಿಸುತ್ತಾರೆ. ಪ್ರತಿಯೊಂದು ಲೇಖನವೂ ಓದುಗರನ್ನು ಚಿಂತನೆಗೆ ಆಹ್ವಾನಿಸುವಂತಿದೆ.
ಸೊಗಸಾದ ಮುದ್ರಣ, ಸುಂದರ ಲೇಖನಗಳು – ಈ ಎರಡರ ಸಮನ್ವಯದಿಂದ ಈ ಪುಸ್ತಕವು ತಿಳುವಳಿಕೆ, ಕುತೂಹಲ ಮತ್ತು ಓದಿನ ಆನಂದವನ್ನೂ ಒದಗಿಸುತ್ತದೆ. ವಿಜ್ಞಾನ-ತಂತ್ರಜ್ಞಾನದಲ್ಲಿ ಆಸಕ್ತಿ ಇರುವವರಿಗಷ್ಟೇ ಅಲ್ಲ, ಸಾಮಾನ್ಯ ಓದುಗರಿಗೂ ಇದು ಜ್ಞಾನವನ್ನು ತಂದುಕೊಡುವ ಕೃತಿ.
ಒಂಟಿತೋಳಗಳ ಬೆನ್ನು ಹತ್ತಿದವರು ಮತ್ತು ಇತರೆ ಸ್ವಾರಸ್ಯಗಳು
ಶ್ರೀ ಸುನೀಲ್ ಬಾರ್ಕೂರು ಕೈಗಾ ಅಣುವಿದ್ಯುತ್ ಸ್ಥಾವರದಲ್ಲಿ ತಂತ್ರಜ್ಞಗು. ಬಿಡುವಿನಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನದ ಬಗ್ಗೆ ಲೇಖನಗಳನ್ನೂ ಬರೆಯುವ ಹವ್ಯಾಸಿ. ವಿಜಯವಾಣೀಯಲ್ಲಿ ಇವರ ವಿಜ್ಞಾನ ಲೇಖನಗಳು ಅಂಕಣ ರೂಪದಲ್ಲಿ ಪ್ರಕಟವಾಗಿವೆ. ಅವುಗಳಿಂದ ಆಯ್ದ ಕೆಲವು ಲೇಖನಗಳನ್ನು ಒಂಟಿತೋಳಗಳ ಬೆನ್ನು ಹತ್ತಿದವರು ಮತ್ತು ಇತರೆ ಸ್ವಾರಸ್ಯಗಳು ಎನ್ನುವ ಶೀರ್ಷಿಕೆಯಲ್ಲಿ ಪ್ರಕಟಿಸಿದ್ದಾರೆ. ಶೀರ್ಷಿಕೆ ಹೇಳುವಂತೆ ಇದು ಸ್ವಾರಸ್ಯಕರ ವಿದ್ಯಮಾನಗಳನ್ನು ಕುರಿತ ಬರಹಗಳು. ಅಮೆರಿಕದ ಶೀತ ಕಾಡಿನಲ್ಲಿ ಇರುವ ತೋಳದ ಮೇಲೆ ನಡೆದ ಅಧ್ಯಯನದಿಂದ ಆರಂಭಿಸಿ, ಅಂತರಿಕ್ಷದಲ್ಲಿ ನಡೆದ ಇನ್ಯಾವುದೋ ವಿದ್ಯಮಾನದ ಬಗ್ಗೆಯೂ, ಭಾರತದಲ್ಲಿ ನಡೆದ ಪರಿಸರ ಸಮಸ್ಯೆಯ ಕುರಿತೂ ಬಾರ್ಕೂರು ಬರೆಯುತ್ತಾರೆ. ವಿಜ್ಞಾನದ ವೈವಿಧ್ಯವನ್ನು ಪರಿಚಯಿಸುವ ಪುಸ್ತಕ.

ಮೂರೂ ಪುಸ್ತಕಗಳನ್ನೂ ಮೈಸೂರಿನ ಬುಕ್ಸ್ ಲೋಕ ಪ್ರಕಟಿಸಿದೆ. ಅಂಕಣ ಬರೆಹಗಳ ಸಂಗ್ರಹಗಳಿಗೆ ಮಾರುಕಟ್ಟೆ ಇಲ್ಲ ಎನ್ನುವ ಈ ಸಂದರ್ಭದಲ್ಲಿ ಇವನ್ನು ಪ್ರಕಟಿಸುವ ಧೈರ್ಯ ಮಾಡಿರುವ ಬುಕ್ಸ್‌ಲೋಕದ ಪ್ರಯತ್ನ ಶ್ಲಾಘನೀಯ. ಧ್ವನಿಪತ್ರಿಕೆಯಿಂದ ಪಠ್ಯಕ್ಕೆ ಬದಲಾದ ಪ್ಲಾಸ್ಟಿಕಾಯಣ, ತಂತ್ರಜ್ಞಾನದ ಅಂಕಣ ಹಾಗೂ ಸ್ವಾರಸ್ಯಕರ ವಿಜ್ಞಾನದ ವಿಷಯಗಳು ಇರುವ ಮೂರು ಪುಸ್ತಕಗಳು ಒಳ್ಳೆಯ ಓದನ್ನು ನೀಡಲಿವೆ.
ಪುಸ್ತಕ ಕೊಳ್ಳಲು ಕೆಳಗಿರುವ ಲಿಂಕನ್ನು ಕ್ಲಿಕ್ಕಿಸಿ
ಒಂಟಿತೋಳಗಳ ಬೆನ್ನು ಹತ್ತಿದವರು ಮತ್ತು ಇತರೆ ಸ್ವಾರಸ್ಯಗಳು
ಪ್ಲಾಸ್ಟಿಕಾಯಣ
ಮೈಸೂರಿನ ಚುರುಮುರಿಗೆ ಅಂತರಿಕ್ಷದ ಟೊಮೇಟೊ
