ಜಾಣರಾಗಲು ‘ಜಾಣ ಪ್ರಶ್ನೆ’ ಓದಿ

-ಲೇಖಕರು: ಎಲ್.ಪಿ.ಕುಲಕರ್ಣಿ, ವಿಜ್ಞಾನ ಶಿಕ್ಷಕರು, ಬಾದಾಮಿ

ಒಂದು ಕಡೆ ಖ್ಯಾತ ತತ್ವಶಾಸ್ತ್ರಜ್ಞ, ವಿಜ್ಞಾನಿ, ರಾಜಕೀಯ ಮುತ್ಸದ್ದಿ ಮೇಲಾಗಿ ಒಬ್ಬ ಆಂಗ್ಲ ಲೇಖಕನಾಗಿದ್ದ ಫ್ರಾನ್ಸಿಸ್ ಬೇಕನ್, ‘ವಿವೇಚನೆಯಿಂದ ಕೂಡಿದ ಪ್ರಶ್ನೆಯನ್ನು ಕೇಳುವುದು ಬುದ್ಧಿವಂತನ ಮೊದಲ ಲಕ್ಷಣ.’ ವೆಂದು ಹೇಳುತ್ತಾನೆ. ಅವನು ಹೇಳಿದ ಮಾತು ನಿಜವೇ ಆಗಿದೆ. ಆದರೆ, ಕೆಲವು ಚಿಕ್ಕ ಮಕ್ಕಳು ತಮ್ಮ ಸುತ್ತಲ ಪರಿಸರದ ಬಗ್ಗೆ ಏನೆಲ್ಲಾ,ಎಷ್ಟೆಲ್ಲಾ ಪ್ರಶ್ನೆಗಳನ್ನು ಕೇಳುತ್ತವೆ ಎಂಬುದು ಸಾಮಾನ್ಯವಾಗಿ ದೊಡ್ಡವರ ಗಮನಕ್ಕೆ ಬಂದಿರುತ್ತದೆ. ಅವರು ಕೇಳುವ ಪ್ರಶ್ನೆಗಳು ಒಂದೇ ಎರಡೇ- ನಾವೇಕೆ ತಿನ್ನುತ್ತೇವೆ? ನಾವೇಕೆ ಮಲಗುತ್ತೇವೆ? ಸೂರ್ಯ-ಚಂದ್ರರು ದೇವರೆನ್ನುತ್ತಾರೆ. ಇದು ನಿಜವೇ? ಹಾಗಾದರೆ,ಮಧ್ಯಾಹ್ನದಲ್ಲಿ ಸೂರ್ಯನಿಂದ ಅಷ್ಟೇಕೆ ನಮಗೆ ಬಿಸಿಯ ಅನುಭವವಾಗುತ್ತದೆ? ಚಲಿಸುವ ಬಸ್ಸಿನಲ್ಲಿ ಕುಳಿತು ಕಿಟಕಿಯಿಂದ ಹೊರ ನೋಡಿದಾಗ, ರಸ್ತೆಯ ಬದಿ ಇರುವ,ದೂರದಲ್ಲಿರುವ ಗಿಡ-ಮರಗಳು ನಮ್ಮ ಹಿಂದೆ ಏಕೆ ಓಡುತ್ತವೆ? …..ಇವೆಲ್ಲಾ ದೊಡ್ಡವರಾದ ನಮಗೆ ಸಿಲ್ಲಿ ಪ್ರಶ್ನೆಗಳೆನಿಸಿ ಆ ಕ್ಷಣದಲ್ಲಿ ಮಗುವನ್ನು ಗದರಿಸಿ ಸುಮ್ಮನೇ ಕುಳಿತುಕೊಳ್ಳುವಂತೆ ಮಾಡಿಬಿಡುತ್ತೇವೆ. ಹಾಗೆ ಮಾಡಬೇಡಿ, ಮಕ್ಕಳ ಪ್ರಶ್ನೆಗಳಿಗೆ ಅವರಿಗೆ ತಿಳಿಯುವ ರೀತಿಯಲ್ಲಿ ಹೇಳಿ ಅವರಲ್ಲಿ ಪ್ರಶ್ನೆ ಕೇಳುವ ಮನೋಭಾವವನ್ನು ಬೆಳೆಸಿ ಎನ್ನುತ್ತಾರೆ ‘ಜಾಣ ಪ್ರಶ್ನೆ-ನಿತ್ಯ ಸಂದೇಹಗಳಿಗೊಂದು ಸಮಾಧಾನ’ಕೃತಿಯ ಲೇಖಕ ಹಾಗೂ ಹಿರಿಯ ವಿಜ್ಞಾನಿ ಶ್ರೀಯುತ ಕೊಳ್ಳೇಗಾಲ ಶರ್ಮಾ.

ಪುಸ್ತಕದಲ್ಲಿ ಶರ್ಮಾ ಅವರೇ ಹೇಳುವಂತೆ, ಪ್ರಶ್ನೆಗಳು ಎಂದ ಮೇಲೆ ದೊಡ್ಡದು, ಚಿಕ್ಕದು, ಗಹನವಾದದ್ದು,ಗಂಭೀರವಾದದ್ದು, ತಮಾಷೆಯದ್ದು ಎಂದೆಲ್ಲ ವರ್ಗೀಕರಿಸಲಾಗದು. ಜಾಣ ಅಥವಾ ಪೆದ್ದ ಪ್ರಶ್ನೆಗಳೂ ಇಲ್ಲ. ಏಕೆಂದರೆ ತಿಳಿಯದ ವಿಷಯದ ಬಗ್ಗೆ ಇರುವ ಕುತೂಹಲವೇ ಪ್ರಶ್ನೆಗಳಿಗೆ ಮೂಲ. ಹೌದು ಈ ಕೃತಿಯಲ್ಲಿ, ಔಷಧಿಗಳು ಕಹಿ ಏಕೆ? ನಾಯಿಗಳಿಗೆ ದೆವ್ವ ಕಾಣಿಸುತ್ತದೆಯೇ? ಕಾಲಿಗೆ ನೋವಾದರೂ ಗುಳಿಗೆ ನುಂಗುತ್ತೇವೇಕೆ? ಬಿದ್ದ ಹಲ್ಲುಗಳು ಮತ್ತೆ ಬೆಳೆಯುವುದಿಲ್ಲವೇಕೆ?….ಹೀಗೆ ಒಟ್ಟು 25 ಕುತೂಹಲಭರಿತ ಪ್ರಶ್ನೆಗಳಿವೆ. ಅವಕ್ಕೆ ತಕ್ಕನಾಗಿ ವೈಜ್ಞಾನಿಕವಾಗಿ ಮೂರ್ನಾಲ್ಕು ಪುಟಗಳಲ್ಲಿ, ಅತ್ಯಂತ ಸರಳಭಾಷೆಯಲ್ಲಿ‌, ಉತ್ತರಗಳನ್ನು ಶರ್ಮಾ ಅವರು ಬರೆದಿದ್ದಾರೆ. ವಿಶೇಷವೆಂದರೆ, ಬಹುಪಾಲು ಉತ್ತರಗಳಲ್ಲಿ ಆಯಾ ಸಂದರ್ಭೋಚಿತವಾಗಿ ಮಂಕತಿಮ್ಮನ ಕಗ್ಗದ ನಾಲ್ಕಾರು ಸಾಲುಗಳನ್ನು, ಕೆಲವು ವಿಶೇಷ ಮಾಹಿತಿಗಳನ್ನು ಲೇಖಕರು ನಮೂದಿಸಿದ್ದಾರೆ. ಇವು ವಿದ್ಯಾರ್ಥಿಗಳು, ಶಿಕ್ಷಕರನ್ನೇ ಮೊದಲುಗೊಂಡು ಒಬ್ಬ ಸಾಮಾನ್ಯ ಓದುಗನಿಗೂ ಸವಿ ಎನಿಸುತ್ತವೆ. ವಿಜ್ಞಾನ ಪ್ರಸಾರ್ ನವ ದೆಹಲಿ ಪ್ರಕಾಶನದಲ್ಲಿ ಪ್ರಕಟಗೊಂಡ ಈ ಪುಸ್ತಕಕ್ಕೆ ವಿಜ್ಞಾನ ಪ್ರಸಾರ್ ನ ನಿರ್ದೇಶಕರಾದ ನಕುಲ್ ಪರಾಶರ್ ಆಶಯ ನುಡಿ ಬರೆದರೆ, ಶಿಕ್ಷಕ, ಸಾಹಿತಿಯಾದ ಸೋಮು ಕುದರಿಹಾಳ ಅವರು ಬೆನ್ನುಡಿ ಬರೆದಿದ್ದಾರೆ. ಪುಸ್ತಕಕ್ಕೆ ಪ್ರಶ್ನಾರ್ಥಕ ಚಿಹ್ನೆಯನ್ನೇ ಹೋಲುವ ಸಮುದ್ರ ಕುದುರೆಯ ಸುಂದರ ಚಿತ್ರದ ಮುಖಪುಟವನ್ನು ಅಜಿತ್ ಕೌಂಡಿನ್ಯ ಅವರು ರಚಿಸಿರುವುದು ಓದುಗರಲ್ಲಿ ಕುತೂಹಲ ಮೂಡಿಸುತ್ತದೆ.

ಪುಸ್ತಕದಲ್ಲಿ ಮೂಡಿಬಂದ ಒಂದು ಕುತೂಹಲ ಪ್ರಶ್ನೆಯನ್ನು‌ ಗಮನಿಸಲಾಗಿ-
ನಾಯಿಗಳಿಗೆ ‌ದೆವ್ವ ಕಾಣಿಸುತ್ತದೆಯೇ?
ಯಾರೋ ಜಾಣಪ್ರಶ್ನೆ ಅಂತ ಯಾಕೆ ಇದಕ್ಕೆ ಹೆಸರಿಟ್ಟಿರಿ ಎಂದು ಕೇಳಿದ್ದಾರೆ. ಅದು ನಿಜವೇ. ಪ್ರಶ್ನೆ ಎಂದರೆ ಪ್ರಶ್ನೆ. ಸಂದೇಹ. ಅನುಮಾನ ಅಷ್ಟೆ. ಅದರಲ್ಲಿ ಒಳ್ಳೆಯದ್ದು, ಕೆಟ್ಟದ್ದು, ಜಾಣತನದ್ದು, ಪೆದ್ದತನದ್ದು ಅಂತೆಲ್ಲ ಇರುವುದಿಲ್ಲ. ಕೆಲವು ಪ್ರಶ್ನೆಗಳು ಪೆದ್ದವು, ಬಾಲಿಶ ಪ್ರಶ್ನೆಗಳು. ಏಕೆಂದರೆ ಅವು ಮಕ್ಕಳ ಪ್ರಶ್ನೆಗಳ ರೀತಿ. ಮಕ್ಕಳಿಗೆ ವಿಷಯ ಗೊತ್ತಿಲ್ಲದಾಗ ಹೇಗೆ ಸಂದೇಹ ಉಂಟಾಗುತ್ತದೆಯೋ ಹಾಗೆಯೇ ಅರಿವು ಸರಿಯಾಗಿ ಇಲ್ಲದಾಗ ಪೆದ್ದವು ಎನ್ನಿಸುವ ಪ್ರಶ್ನೆಗಳು ತೋರಬಹುದು. ಉದಾಹರಣೆಗೆ, ಈ ಪ್ರಶ್ನೆ. ನಾಯಿಗಳಿಗೆ ಮಾತ್ರ ದೆವ್ವ ಕಾಣಿಸಿಕಳ್ಳುತ್ತದೆಯಲ್ಲ. ಯಾಕೆ? ಒಂದು ನಿಮಿಷ ಇದೆಂಥ ಪೆದ್ದ ಪ್ರಶ್ನೆ ಎಂದು ನಮಗೆ ಮಾತ್ರ ಅನಿಸುತ್ತದೆ. ಆ ಮಗುವಿಗೆ ಅಲ್ಲ, ಏಕೆಂದರೆ ಪ್ರಶ್ನೆಯನ್ನು ಗಮನಿಸಿ. ನಾಯಿಗಳಿಗೆ ದೆವ್ವ ಕಾಣಿಸಿಕೊಳ್ಳುತ್ತದೆಯೇ ಎಂದು ಅದು ಕೇಳಲೇ ಇಲ್ಲ. ಕಾಣಿಸಿಕೊಳ್ಳುತ್ತದೆ ಎಂದು ಖಂಡಿತವಾಗಿ ನಂಬಿಬಿಟ್ಟಿದೆ. ಆದರೆ ಹೇಗೆ ಎಂಬುದು ಸಂದೇಹ. ಅಷ್ಟೆ.

ನಾಯಿಗಳಿಗೆ ದೆವ್ವ ಕಾಣಿಸಿಕೊಳ್ಳುತ್ತದೆ ಎನ್ನುವ ನಂಬಿಕೆ ಹುಟ್ಟಿದ್ದು ಹೇಗೆ? ಬಹುಶಃ ಯಾರೋ ರಾತ್ರಿ ನಾಯಿ ಬೊಗಳಿದಾಗ, ಏನೋ ಓಡಾಡುತ್ತಿರಬೇಕು ಅದಕ್ಕೇ ಅದು ಬೊಗಳುತ್ತದೆ ಎಂದು ಹೇಳಿರುತ್ತಾರೆ. ಏನೋ ಎನ್ನುವುದು ಏನು ಎಂಬ ಪ್ರಶ್ನೆ ಬಂದಾಗ, ಬೇರೆ ಕಥೆಗಳಲ್ಲಿ ಕೇಳಿದ ದೆವ್ವ, ಭೂತಗಳೇ ಇರಬೇಕು ಎಂದು ಮಗು ನಂಬಿಬಿಡುತ್ತದೆ. ಏಕೆಂದರೆ ರಾತ್ರಿಯ ಹೊತ್ತು ಬೇರೇನೂ ಓಡಾಡುವುದಿಲ್ಲವಷ್ಟೆ. ನಿರ್ಜನವಾದ, ಯಾರೂ ಓಡಾಡದ ಹೊತ್ತಿನಲ್ಲಿ ನಾಯಿಗಳು ಸುಮ್ಮ, ಸುಮ್ಮನೆ ಬೊಗಳುತ್ತವೆ ಎಂದರೆ ಅಲ್ಲಿ ಏನಾದರೂ ಓಡಾಡುತ್ತಿರಲೇಬೇಕಲ್ಲ ಎನ್ನುವ ತರ್ಕದಿಂದ ಈ ನಂಬಿಕೆಗಳು ಹುಟ್ಟಿವೆ. ವಾಸ್ತವವಾಗಿ ದೆವ್ವಗಳೂ ಇಲ್ಲ. ನಾಯಿಗಳಿಗೆ ದೆವ್ವಗಳು ಕಾಣುವುದೂ ಇಲ್ಲ.

ಹಾಗಿದ್ದರೆ ನಾಯಿಗಳು ರಾತ್ರಿ ಹೊತ್ತು ಬೊಗಳುವುದೇಕೆ? ಸುತ್ತಲೂ ಯಾರೂ ಇಲ್ಲದಿದ್ದರೂ ಅವು ಬೊಗಳುತ್ತವಲ್ಲ, ಏಕೆ? ಈ ಪ್ರಶ್ನೆಗಳು ನಮಗೆ ನಾಯಿಗಳ ಬಗ್ಗೆ ಅದರಲ್ಲೂ ರಾತ್ರಿಯ ಹೊತ್ತು ಅವುಗಳ ಚಟುವಟಿಕೆಯ ಬಗ್ಗೆ ಹೆಚ್ಚು ಗೊತ್ತಿಲ್ಲದೇ ಇರುವುದರಿಂದ ಉಂಟಾದವು ಎನ್ನಬಹುದು. ನಾಯಿಗಳು ಬೊಗಳುವುದಕ್ಕೆ ಹಲವು ಕಾರಣಗಳಿರುತ್ತವೆ. ಅವು ತಮ್ಮ ವೈರಿಯನ್ನು ಕಂಡು ಬೆದರಿದರೂ ಬೊಗಳುತ್ತವೆ. ವೈರಿಯನ್ನು ಕಂಡು ಬೆದರಿಸಲೂ ಬೊಗಳುತ್ತವೆ. ಆದರೆ ಈ ಎರಡೂ ಸಮಯದಲ್ಲಿ ಅವುಗಳ ಬೊಗಳುವ ರೀತಿ ಬೇರೆ, ಬೇರೆಯಾಗಿರುತ್ತದೆ. ಹಾಗೆಯೇ, ಅವು ತಮ್ಮ ಬಳಗದ ಇತರೆ ನಾಯಿಗಳ ಜೊತೆಗೂ ಬೊಗಳುತ್ತಾ ಮಾತಾಡುತ್ತವೆ. ರಾತ್ರಿಯ ಹೊತ್ತು ಕೆಲವು ನಾಯಿಗಳು ಊಳಿಡುವುದನ್ನು ಕೇಳಿರಬಹುದು.‌ ಒಂದು ನಾಯಿ ಹೀಗೆ ಊಳಿಟ್ಟಾಗ, ಅದಕ್ಕೆ ಪ್ರತಿಕ್ರಿಯೆಯಾಗಿ ಇನ್ನೊಂದು ಹುಯಿಲಿಡುತ್ತದೆ. ಇದು ಒಂದು ಕಾರಣ.

ನಾಯಿಗಳು ಹಿಂಡುಗಟ್ಟಿ ವಾಸಿಸುವ ಪ್ರಾಣಿಗಳು. ಇವುಗಳಲ್ಲಿ ಒಂದು ಗಂಡು ಎಲ್ಲರನ್ನೂ ಆಳುತ್ತದೆ. ಈ ಗಂಡು ತನ್ನ ಹಿಂಡಿಗೆ ಒಂದು ಸೀಮೆಯನ್ನು ಗುರುತಿಸಿರುತ್ತದೆ. ನಾವು ಮನೆಗೆ ಬೇಲಿಕಟ್ಟುವ ಹಾಗೆ, ಗಂಡು ನಾಯಿಗಳು ಕಂಡ,ಕಂಡ ಮರ, ದೀಪದ ಕಂಭ, ಗಿಡಗಳ ಮೇಲೆ ಉಚ್ಚೆ ಹುಯಿದು, ಅಂದರೆ ಮೂತ್ರ ಮಾಡಿ ಅವನ್ನು ತಮ್ಮ ಜಾಗ ಎಂದು ಗುರುತಿಸುತ್ತವೆ. ಈ ಸೀಮೆಯ ಒಳಗೆ ಬೇರೆ ನಾಯಿ ಬಂದಾಗ ಅದನ್ನು ಬೆದರಿಸಿ ಅಟ್ಟುತ್ತವೆ. ರಾತ್ರಿ ಹೊತ್ತು ಊಳಿಡುವುದು ಕೂಡ ತನ್ನ ಸೀಮೆಯನ್ನು ಗುರುತಿಸುವುದಕ್ಕೆ. ಈ ಕೂಗನ್ನು ಕೇಳಿದ ಬೇರೆ ನಾಯಿಗಳು ಅಲ್ಲಿಗೆ ಪ್ರವೇಶಿಸಲಾರವು.

ಇನ್ನೂ ಒಂದು ಸಂದರ್ಭದಲ್ಲಿ ನಾಯಿಗಳು ಹುಯಿಲಿಡುತ್ತವೆ.‌ ತಮಗೆ ಗಾಯವಾದಾಗ, ನೋವಿನಿಂದಲೂ ಅವು ಊಳಿಡುತ್ತವೆ. ಬೀದಿ ನಾಯಿಗಳು ಹೀಗೆ ಯಾವ ಕಾರಣಕ್ಕೆ ಊಳಿಡುತ್ತವೆ ಎನ್ನುವುದು ನಮಗೆ ಗೊತ್ತಿಲ್ಲದಾಗ, ಅವಕ್ಕೆ ಏನೋ ಕಂಡಿರಬೇಕು. ಅದಕ್ಕೇ ಅವು ಅರಚುತ್ತಿವೆ ಎಂದು ನಾವು ಭಾವಿಸುತ್ತೇವೆ. ಆದರೆ ಅಲ್ಲಿ ಬೇರೆ ಏನೂ ಇಲ್ಲ ಎಂದು ನಮಗೆ ಗೊತ್ತಿರುವುದರಿಂದ, ನಮಗೆ ಕಾಣದ್ದು ಅವಕ್ಕೆ ಕಂಡಿದೆ ಎಂದುಕೊಳ್ಳುತ್ತೇವೆ. ದೆವ್ವವನ್ನು ನಾಯಿ ಕಂಡಿ‌ರಬೇಕು ಎಂದು ಭಾವಿಸುತ್ತೇವೆ.

ನಾಯಿಗಳು ಇನ್ನೊಂದು ನಾಯಿ ಬೊಗಳಿದಾಗಷ್ಟೆ ಬೊಗಳುವುದಿಲ್ಲ. ಸಾಮಾನ್ಯವಾಗಿ ನಾಯಿಗಳು ವಾಸನೆಯನ್ನು ಚೆನ್ನಾಗಿ ಗುರುತಿಸಬಲ್ಲವು. ಹೀಗಾಗಿ ತಮ್ಮ ಸೀಮೆಯಲ್ಲಿ ಬೇರೆ ನಾಯಿಗಳು, ಪ್ರಾಣಿಗಳು, ಹಾವು, ಇಲಿ ಬಂದರೂ ಅವು ಬೊಗಳುತ್ತವೆ. ಇವು ಯಾವುವೂ ನಮಗೆ ಗೊತ್ತಾಗುವುದಿಲ್ಲ. ಆದ್ದರಿಂದ ಅಲ್ಲಿ ಏನೂ ಇಲ್ಲ ಎಂದುಕೊಂಡಿರುತ್ತೇವೆ. ಹೀಗೆಯೇ ನಾಯಿಗಳ ಕಿವಿ ಕೂಡ ಬಲು ಚುರುಕು.‌ ಬಲು ದೂರದ ಶಬ್ದಗಳು ಅವಕ್ಕೆ ಕೇಳಿಸುತ್ತವೆ, ನಮಗೆ ಕೇಳಿಸುವುದಿಲ್ಲ. ಅಂತಹ ಶಬ್ದಗಳನ್ನು ಕೇಳಿ ನಾಯಿಗಳು ಪ್ರತಿಕ್ರಿಯಿಸಿದಾಗ ನಾವು ಅವು ಸುಮ್ಮನೆ ಗಾಳಿಯನ್ನೇ ಕಂಡು ಬೊಗಳುತ್ತಿವೆ ಎಂದು ಭಾವಿಸುತ್ತೇವೆ.

ಹೀಗೆ ನಾಯಿಗಳ ನಡವಳಿಕೆಯನ್ನು ನಾವು ಸಂಪೂರ್ಣವಾಗಿ ಅರ್ಥಮಾಡಿಕೊಂಡಿಲ್ಲವಾದ್ದರಿಂದ ಅವು ಬೊಗಳಿದಾಗಲೆಲ್ಲ ಏನೆನೋ ಕಂಡಿರಬೇಕು ಎಂದುಕೊಳ್ಳುತ್ತೇವೆ. ರಾತ್ರಿಯ ಹೊತ್ತೇ ನಾಯಿಗಳು ಹೆಚ್ಚು ಬೊಗಳುವುದಕ್ಕೆ ಕಾರಣ, ನಾಯಿಗಳು ನಿಶಾಚರಿಗಳು. ಸ್ವಭಾವತಃ ಅವು ರಾತ್ರಿಯ ಹೊತ್ತೇ ಹೆಚ್ಚು ಚುರುಕಾಗಿರುತ್ತವೆ. ಬೆಳಗ್ಗಿನ ಹೊತ್ತು ನಿದ್ರೆ ಮಾಡುತ್ತವೆ. ಈ ಎಲ್ಲ ಕಾರಣಗಳಿಂದಾಗಿ, ರಾತ್ರಿ ಯಾರೂ ಕಾಣದಿದ್ದರೂ ನಾಯಿಗಳು ಬೊಗಳಿದಾಗ ನಮಗೆ ಕಾಣದ್ದು ಏನೋ ಅವಕ್ಕೆ ಗೋಚರಿಸಿರಬೇಕು. ಎಂದು ನಮಗೆ ಅನಿಸುವುದು‌ ಸಹಜ.‌ ಇದರ ಜೊತೆಗೆ ದೆವ್ವ, ಭೂತಗಳನ್ನು ಕುರಿತ‌ ನಮ್ಮ‌ ನಂಬಿಕೆಗಳು ಈ ಅನಿಸಿಕೆಯನ್ನೇ ಭಯವನ್ನಾಗಿಸಿಬಿಡುತ್ತವೆ. ನಾಯಿ ದೆವ್ವವನ್ನು ಕಂಡಿದೆ ಎಂದು ಭಾವಿಸುತ್ತೇವೆ.

ಹೀಗೆ ಒಟ್ಟು 25 ಕುತೂಹಲ ಭರಿತ ಪ್ರಶ್ನೆಗಳಿಗೆ ಸರಳವಾಗಿ,ಸರಳ ವಿವರಣೆಯೊಂದಿಗೆ ಶ್ರೀಯುತ ಕೊಳ್ಳೆಗಾಲ ಶರ್ಮಾ ಅವರು ಉತ್ತರ ಕೊಡುತ್ತಾ ಸಾಗುತ್ತಾರೆ. ವಿಶೇಷವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಈ ಪುಸ್ತಕ ಅತ್ಯುಪಯುಕ್ತ ಎನ್ನುವುದರಲ್ಲಿ ಎರಡು ಮಾತಿಲ್ಲ. ಒಟ್ಟಿನಲ್ಲಿ ‘ಜಾಣ ಪ್ರಶ್ನೆ’ ಕೃತಿ ಪ್ರತಿಯೊಬ್ಬರ ಗ್ರಂಥಾಲಯದಲ್ಲಿರಬೇಕಾದ ಅತ್ಯಮೂಲ್ಯ ಪುಸ್ತಕ.

Leave a Comment

Your email address will not be published. Required fields are marked *

Scroll to Top