
ಮಾನವನಿಗೆ ಬಾಹ್ಯಾಕಾಶವೆಂಬ ವಿಷಯ ಸದಾ ಕುತೂಹಲದ ವಸ್ತುವಾಗಿದೆ. ಪ್ರಾಚೀನ ಕಾಲದಿಂದಲೂ ಮಾನವನು ಆಕಾಶದ ಕಡೆ ವೀಕ್ಷಿಸುತ್ತಾ, ಅಲ್ಲಿರುವ ರಹಸ್ಯಗಳನ್ನು ಪತ್ತೆಹಚ್ಚುವ ಆಸೆಯೊಂದಿಗೆ ಅನೇಕ ಪ್ರಶ್ನೆಗಳನ್ನು ಕೇಳಿಕೊಂಡಿದ್ದಾನೆ. ಸೂರ್ಯ, ಚಂದ್ರ, ಗ್ರಹ-ನಕ್ಷತ್ರಗಳು, ಆಕಾಶಕಾಯಗಳು—ಇವೆಲ್ಲವೂ ಅವನ ಕಲ್ಪನೆ, ತಿಳಿವು ಮತ್ತು ಸಂಶೋಧನೆಗಳ ಕೇಂದ್ರಬಿಂದುಗಳಾಗಿ ರೂಪುಗೊಂಡವು. ಊಹೆಗೆ ಮಿತಿಯೇ ಇಲ್ಲದ ಮಾನವ, ಕಾಲಕ್ರಮೇಣ ತನ್ನ ಜ್ಞಾನ, ಅನುಭವ ಮತ್ತು ವಿಜ್ಞಾನಶಕ್ತಿಯನ್ನು ಬಳಸಿಕೊಂಡು ಬಾಹ್ಯಾಕಾಶವನ್ನು ಅರ್ಥಮಾಡಿಕೊಳ್ಳುವ ನೂರಾರು ಪ್ರಯೋಗಗಳನ್ನು ನಿರಂತರವಾಗಿ ನಡೆಸುತ್ತ ಬಂದಿದ್ದಾನೆ.
ಈ ಪ್ರಯತ್ನಗಳ ಫಲವಾಗಿ ಅನೇಕ ವೈಜ್ಞಾನಿಕ ಮತ್ತು ತಂತ್ರಜ್ಞಾನ ಆವಿಷ್ಕಾರಗಳು ಮನುಕುಲಕ್ಕೆ ಲಭ್ಯವಾದವು. ವಿಶೇಷವಾಗಿ ಇತ್ತೀಚಿನ ದಶಕಗಳಲ್ಲಿ ಬಾಹ್ಯಾಕಾಶ ಕ್ಷೇತ್ರದಲ್ಲಿ ಅಸಾಧಾರಣ ಪ್ರಗತಿ ಕಂಡುಬಂದಿದೆ. ಇಂದಿನ ದಿನಗಳಲ್ಲಿ ಭೂಮಿಯ ಮೇಲೆ ನಡೆಯುತ್ತಿರುವ ಮಾನವ ಅಭಿವೃದ್ಧಿಗೆ ಬಾಹ್ಯಾಕಾಶ ತಂತ್ರಜ್ಞಾನ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತಿದೆ. ಸಂವಹನ, ಹವಾಮಾನ ಅಧ್ಯಯನ, ನಾವಿಗೇಶನ್, ರಕ್ಷಣಾ ವ್ಯವಸ್ಥೆ, ಕೃಷಿ, ಪರಿಸರ ಸಂರಕ್ಷಣೆ—ಇಂತಹ ಜೀವನಾಂಶಗಳ ಮಟ್ಟವನ್ನು ಮೇಲಕ್ಕೆತ್ತುವಲ್ಲಿ ಬಾಹ್ಯಾಕಾಶ ತಂತ್ರಜ್ಞಾನದ ಕೊಡುಗೆ ಅಪಾರ.
ಹೊಸ ಪ್ರಯತ್ನ, ಅನ್ವೇಷಣೆ ಮತ್ತು ಸಂಶೋಧನೆಗಳನ್ನು ಅವಲಂಬಿಸಿಕೊಂಡು ಮಾನವ ಇಂದು ಸುಖಮಯ, ಜ್ಞಾನಮಯ ಮತ್ತು ವಿಶ್ವಾಸಮಯ ಜೀವನವನ್ನು ಕಟ್ಟಿಕೊಂಡಿದ್ದಾನೆ. ಬಾಹ್ಯಾಕಾಶ ತಂತ್ರಜ್ನಾನದ ಅಳವಡಿಕೆಯಿಂದ ಜೀವನಕ್ಕೆ ಬೇಕಾಗುವ ಅನೇಕ ಸೌಲಭ್ಯಗಳನ್ನು ಸುಲಭವಾಗಿ ಸಾಧಿಸಲು ಸಾಧ್ಯವಾಗಿದೆ. ಇದಕ್ಕಿಂತ ವಿಶಿಷ್ಟವಾದ ಸಂಗತಿಯೇನೇಂದರೆ—ಮಾನವ ತನ್ನದೇ ದೇಹವನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ದು ಅಲ್ಲಿ ನೇರ ಅನುಭವಗಳನ್ನು ಪಡೆಯುವ ಮಟ್ಟಕ್ಕೆ ಅಭಿವೃದ್ಧಿಯಾಗಿದೆ. ಅದೇ ಬಾಹ್ಯಾಕಾಶ ಮಾನವಸಹಿತ ಯಾನ.
ಬಾಹ್ಯಾಕಾಶ ಯಾನವು ಇಂದಿನ ಮಾನವನ ಅತ್ಯಂತ ರೋಮಾಂಚನಕಾರಿ, ಸಾಹಸಮಯ ಮತ್ತು ವೈಜ್ಞಾನಿಕ ವಿಜಯಗಳಲ್ಲಿ ಒಂದಾಗಿ ಪರಿಗಣಿತವಾಗಿದೆ. ಭೂಮಿಯ ಗುರುತ್ವ ಬಲವನ್ನು ನಿಭಾಯಿಸಿ, ತೂಕವಿಲ್ಲದ ಪರಿಸ್ಥಿತಿಯಲ್ಲಿ ಸಾಗುವ ಅನುಭವ, ವಾತಾವರಣದ ಮಿತಿಯನ್ನು ದಾಟಿ ಅನಂತ ಬಾಹ್ಯಾಕಾಶದಲ್ಲಿ ತೇಲುವುದಾದ ಅನುಭವ—ಇವೆಲ್ಲವೂ ಮಾನವನ ಧೈರ್ಯ, ಕುತೂಹಲ ಮತ್ತು ತಂತ್ರಜ್ಞಾನ ಸಾಮರ್ಥ್ಯಕ್ಕೆ ಸ್ಮಾರಕ. ಬಾಹ್ಯಾಕಾಶ ಯಾನಗಳ ಮೂಲಕ ಮಾನವ ಅನೇಕ ನೇರ ಅನುಭವಗಳನ್ನು ಸಂಗ್ರಹಿಸಿ, ವಿಶ್ವದ ರಹಸ್ಯಗಳನ್ನು ತಿಳಿಯುವ ಹೊಸ ದಾರಿಗಳನ್ನು ತೆರೆದಿದ್ದಾನೆ.
ಈ ಎಲ್ಲ ಅಂಶಗಳನ್ನು ಒಳಗೊಂಡ ಮಹತ್ವದ ದೃಷ್ಟಿಕೋಣವನ್ನು ನೀಡುವ ಪುಸ್ತಕವೇ “ಬಾಹ್ಯಾಕಾಶ ಯಾನ”. ಡಾ. ಪಿ. ಶಶಿಕುಮಾರ್ ಮತ್ತು ಅರವಿಂದ ಬಿ. ಅವರ ಸಂಯುಕ್ತ ಕೃತಿಯಾಗಿ ಮೊದಲಿಗೆ ಇಂಗ್ಲಿಷಿನಲ್ಲಿ ಬರೆಯಲ್ಪಟ್ಟ ಈ ಕೃತಿ, ಶ್ರೀನಾಥ್ ರತ್ನಕುಮಾರ್ ಅವರ ಅನುವಾದದಿಂದ ಕನ್ನಡದಲ್ಲಿ ಜೀವಂತವಾಗಿ ರೂಪುಗೊಂಡಿದೆ. ಸಾಮಾನ್ಯ ಓದುಗನಿಗೂ ಸುಲಭವಾಗಿ ಅರ್ಥಮಾಡಿಕೊಳ್ಳುವ ರೀತಿಯಲ್ಲಿ, ಬಾಹ್ಯಾಕಾಶ ಯಾನದ ಇತಿಹಾಸ, ತಂತ್ರಜ್ಞಾನ, ಸವಾಲುಗಳು, ಸಾಧನೆಗಳು ಮತ್ತು ಭವಿಷ್ಯದ ಸಾಧ್ಯತೆಗಳನ್ನು ಈ ಪುಸ್ತಕ ಸಂಕ್ಷಿಪ್ತವಾಗಿಯೂ ಆಕರ್ಷಕವಾಗಿಯೂ ಪರಿಚಯಿಸುತ್ತದೆ.

ಈ ಕೃತಿ ಬಾಹ್ಯಾಕಾಶವನ್ನು ಕನಸು, ಕುತೂಹಲ ಮತ್ತು ವೈಜ್ಞಾನಿಕ ದೃಷ್ಟಿಯಿಂದ ನೋಡಲು ಬಯಸುವ ಪ್ರತಿಯೊಬ್ಬ ಓದುಗರಿಗೂ ಅಮೂಲ್ಯವಾದ ದಾರಿದೀಪವಾಗುತ್ತದೆ.
Amazon Ads-Pie Matrix Telescope

